Recent Movies

Share This Article To your Friends

ಪ್ರೇಮ ಕಥೆಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪ್ರೇಮ ಕಥೆಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಅವಳು ಮಾಡು ಎಂದಳು. ಅವನು ಮಾಡಲಿಲ್ಲ..!





ಅವನು ಅವಳನ್ನು ತುಂಬಾ ಪ್ರೀತಿಸುತ್ತಿದ್ದ. ಅವಳೂ ಅವನನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದಳು. ಆದರೆ ಇಷ್ಟ ಬಹುಕಾಲ ಇರಲಿಲ್ಲ. ಅವರಿಬ್ಬರ ಪರಿಶುದ್ಧ ಪ್ರೇಮವನ್ನು ಕಂಡು ಭಗವಂತನಿಗೂ ಅಸೂಯೆ ಹುಟ್ಟಿತೆಂದು ಕಾಣಿಸುತ್ತೆ. ಹುಡುಗಿಗೆ ಬೇರೆಯ ಕಡೆ ಮದುವೆ ಫಿಕ್ಸ್ ಆಗಿ ಹೋಯ್ತು.

ಕೊನೆಯದಾಗಿ ತನ್ನ ಹುಡುಗನನ್ನು ಮಾತಾಡಿಸಬೇಕು ಅಂತ ಅವಳಿಗೆ ಆಸೆ. ಅವನಿಗೆ ಫೋನಾಯಿಸಿ ಕರೆದಳು. ಅದೊಂದು ಸುಂದರ ಸಮುದ್ರ ತೀರ. ಕಣ್ಣೀರುಗಳು ಸಮುದ್ರದ ಉಪ್ಪುನೀರಿನೊಂದಿಗೆ ಬೆರೆಯತೊಡಗಿದವು. ಅವಳ ಮನಸ್ಸಿನಲ್ಲಿ ದುಃಖ ತಡೆಯಲಾಗಲಿಲ್ಲ.

ಅವನನ್ನು ತಬ್ಬಿಕೊಂಡಳು. ಬಿಟ್ಟು ಹೋಗುವ ಹುಡುಗಿ ತಬ್ಬಿಕೊಂಡು ಮತ್ತೆ ಪ್ರೇಮದ ನಿನಾದವನ್ನು ಗರಿಗೆದರುವಂತೆ ಮಾಡಿದಳು. ಬಿಡಿಸಿಕೊಳ್ಳಲಾಗದಂತಹ ಬಂಧಿಸಿ ಹಿಡಿದುಕೊಂಡ ಅವಳನ್ನು.. ಅವಳಲ್ಲಿ ಆಸೆಗಳು ಮೊಳಕೆಯೊಡೆಯತೊಡಗಿದವು. ಬಿಟ್ಟುಬಿಡು. ನಾನು ಹೊರಡಬೇಕು.. ನಾನು ನಿನ್ನವಳಲ್ಲ... ಪರಸ್ತ್ರೀ ನಾನು ಎಂದು ಅವನೆದೆಯಿಂದ ಬಿಡಿಸಿಕೊಳ್ಳಲು ತವಕಿಸಿದಳು.. ಇಲ್ಲ ಅವನ ಬಾಹು ಬಂಧನದ ಬಿಗಿಯಲ್ಲಿ ಅವಳು ಇನ್ನಷ್ಟು ಮೋಹಿತಳಾದಳು..

ಅವನನ್ನು ಇನ್ನಷ್ಟು ಬಿಗಿಯಾಗಿ ತಬ್ಬಿಕೊಂಡ. ತನ್ನ ತುಟಿಗಳನ್ನು ಕಿವಿಬಳಿ ತಂದಳು. ಇನ್ನೆಷ್ಟು ದಿನ ನಮ್ಮ ಪ್ರೇಮ? ನಾನು ನಿನ್ನು ಬಿಟ್ಟು ಹೋಗುತ್ತಿದ್ದೇನೆ. ಇಂದು ಮಾತ್ರವೇ ನಾನು ನಿನ್ನವಳು ಎಂದು ಕಿವಿಯಲ್ಲಿ ವಟಗುಟ್ಟಿದಳು.

ಅವನ ಕಣ್ಣೀರು ಅವಳ ಕತ್ತಿನ ಮೇಲೆ ಬಿತ್ತು.. ತಲೆ ಎತ್ತಿ ನೋಡಿದಳಾಕೆ. ಅರೆ.. ಅವನು ಅಳುತ್ತಿದ್ದಾನೆ... ಹೆಣ್ಣಿನಂತೆ ದುಃಖಿಸುತ್ತಿದ್ದಾನೆ. ಅವಳು ಸಮಾಧಾನ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಅಪ್ಪ ಅಮ್ಮನಿಗಾಗಿ ಬೇರೆ ಮದುವೆಯಗದೇ ಆಕೆಗೆ ವಿಧಿ ಇರಲಿಲ್ಲ.

ಮರೆಯದ ನೆನಪುಗಳನ್ನು ಕಣ್ಣೀರು ತೊಳೆದು ಹಾಕಲಿ ಎಂದು ಅವನನ್ನು ದುಃಖದಲ್ಲೇ ಬಿಟ್ಟು ಮುಂದಕ್ಕೆ ಹೋದಳು. ಸ್ವಲ್ಪ ದೂರ ಹೋಗಿ ಹಿಂದಿರುಗಿ ಬಂದಳು.. ಹೇ ನನಗೆ ಒಂದೇ ಒಂದು ಕೊನೆ ಆಸೆ ಇದೆ.. ನೆರವೇರಿಸ್ತೀಯ? ಎಂದು ಕೇಳಿದಳು.. ಪ್ರಿಯತಮೆಯ ಕೊನೆಯ ಆಸೆ.. ಸಾಯಿ ಎಂದರೆ ಕ್ಷಣಾರ್ಧದಲ್ಲೇ ಪ್ರಾಣ ಕೊಡಬಲ್ಲ. ಅಷ್ಟೋಂದು ಪ್ರೀತಿ ಅವಳ ಮೇಲೆ. ಆಯ್ತು ಏನು ಹೇಳು ಎಂದ ದುಗುಡದ ದನಿಯಲ್ಲಿ.

ಕೊನೆಯದಾಗಿ ನೀನು ನನಗೆ ಟಾಟ ಮಾಡು ಎಂದಳು.. ಹೇಗೆ ಮಾಡುತ್ತಾನೆ..? ಅಷ್ಟೋಂದು ನಿಶ್ಕಲ್ಮಶ ಮನಸ್ಸಿನಿಂದ ಪ್ರೀತಿಸಿದ ಹುಡುಗಿಯನ್ನು ಬಿಟ್ಟು ಕೊಡುವ ಮನಸ್ಸು ಅವನಿಗೆ ಇರಲಿಲ್ಲ.. ಅವಳನ್ನು ನೋಡಿದ.. ಅವಳು ಮತ್ತೆ ಮತ್ತೆ ಕೆಳಿದಳು.. ಪ್ಲೀಸ್ಕಣೋ.. ನೀನು ಕೊನೆಯದಾಗಿ ನನಗೆ ಟಾಟಾ ಮಾಡು.. ನೀನು ನಗು ನಗುತ್ತ ನನ್ನನ್ನು ಕಳಿಸಿಕೊಡು.. ನೀನು ಖುಷಿಯಿಂದ ಟಾಟಾ ಮಾಡಿ ನನ್ನನ್ನು ಕಳಿಸಿಕೊಟ್ಟರೆ ನನ್ನ ಮನಸ್ಸು ನಿರಾಳ ಆಗುತ್ತೆ. ಇಲ್ಲವಾದಲ್ಲಿ ನಿನಗೆ ಮೋಸ ಮಾಡಿದ ಭಾವನೆ ಕೊರಗುತ್ತಿರುತ್ತೆ, ಸಾಯೋವರೆಗೂ.. ಪ್ಲೀಸ್.. ಮಾಡು ಎಂದು ಅಂಗಲಾಚಿದಳು.. ಅವನು ಮಾಡಲೇ ಇಲ್ಲ..
 
ಅವಳು ದುಃಖದಲ್ಲೇ ಮನೆಗೆ ತೆರಳಿದಳು.. ಅವನು ಇಷ್ಟೋಂದು ಪ್ರೀತಿಸ್ತಾನೆ.. ನನ್ನನ್ನು ಕನಸಿನಲ್ಲೂ ಇನ್ನೊಬ್ಬರಿಗೆ ಬಿಟ್ಟುಕೊಡದಷ್ಟು ನನ್ನ ಮೇಲೆ ಪ್ರೀತಿ ಇಟ್ಟುಕೊಂಡಿದ್ದಾನೆ. ಅಂಥವನನ್ನೇ ಪಡೆದುಕೊಳ್ಳಲಾಗದ ನನ್ನ ಬದುಕನ್ನು ಇನ್ನಾರಿಗೋ ಕಾಮದ ದಾಹಕ್ಕೆ ಮುಡಿಪಾಗಿಡಬೇಕೆ? ಇದು ಎಷ್ಟು ಸರಿ ಎಂದು ದುಃಖಿಸತೊಡಗಿದಳು. ಅಪ್ಪ ಅಮ್ಮನ ಮಾತಿಗೂ ಎದುರಾಡದೇ, ಅವನ ನಿರ್ಮಲ ಪ್ರೀತಿಯನ್ನೂ ಬಿಟ್ಟುಕೊಡಲಾಗದೇ ಚಿಂತೆಗೀಡಾದಳು.. ಮನೆಯಲ್ಲಿ ಫ್ಯಾನ್ ಇತ್ತು.. ಅಲ್ಮೆರಾದಲ್ಲಿ ಆಕೆಯ ದಾವಣಿ ಇತ್ತು.. ಇಷ್ಟು ಸಾಕು ಬದುಕನ್ನು ದುಸ್ತರ ಮಾಡಿಕೊಳ್ಳಲು..

ಪ್ರೀತಿಸಿದವನನ್ನು ಒಂಟಿ ಮಾಡಿ ಬಿಟ್ಟು ಹೋದಳು.. ಮತ್ತೆಂದೂ ಬಾರದ ಲೋಕಕ್ಕೆ.. ಅವನು ಟಾಟಾ ಮಾಡಿಲ್ಲ ಅಂತ ಆವಳು ಆತ್ಮಹತ್ಯೆ ಮಾಡಿಕೊಂಡಿಲ್ಲ. ಅವನ ಮೇಲಿನ ಅಗಾಧ ಪ್ರೀತಿಯನ್ನು ಇನ್ನೊಬ್ಬರ ಜೊತೆಗೆ ಹಂಚಿಕೊಳ್ಳುವ ಮನಸ್ಸಿಲ್ಲದೇ..!

ಮಾರ್ಜಾಲ ಪ್ರೇಮ..






ಅವಳು... ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ಪುಟ ಪುಟನೆ ಅನವರತವಾಗಿ ಅತ್ತಿತ್ತ ಓಡಾಡುವ ಮನದೊಡತಿ.. ಅವನೋ.. ಸದಾ ಆರ್ಭಟಿಸಿ ಘರ್ಜಿಸುವ ಆಗಂತುಕ... ಅವಳು ಗರ್ಭಗುಡಿಯೊಳಗಿರುವ ಮೌನದೇವತೆ.. ಜಕಣಾಚಾರಿಯ ಕೆತ್ತನೆಯಲ್ಲಿ ಅರಳಿದ ಮೃದು ಶಿಲೆ.. ಅವನೋ ಭಕ್ತರೆದುರು ಅರ್ಥವಾಗದ ಮಂತ್ರಗಳನ್ನುದುರಿಸೋ ಪೂಜಾರಿ.. ಬಯ್ಯುವನೋ.. ಪೂಜಿಸುವನೋ ಅರ್ಥವಾಗದು ಅವಳಿಗೆ.. ಅವಳ ಮನಸಿಗೆ..!

ಅವನೋ.. ಹುರಿ ಮೀಸೆಯ ಸರದಾರ.. ತಿಳಿದಿಲ್ಲ ಅವನಿಗೆ.. ದಾನ ಧರ್ಮದ ಉಪಕಾರ.. ದೇಹ ಬಲಿಯುವುದರೊಳಗೆ ಗೃಹಬಂಧನಕ್ಕೆ ಕಾಲಿಟ್ಟಳು.. ಮನೆಯವರ ಬಲವಂತಕ್ಕೆ... ಜಗದ ನಿಯಮದ ಕಟ್ಟಳಗೆ ತಲೆಬಾಗಿ.. ಯಾರಿಗೆ ಹೇಳಬೇಕವಳು ಕೂಗಿ..? ತನ್ನ ನೋವನ್ನು ಅರಿವವರು ಯಾರೂ ಇರಲಿಲ್ಲವಲ್ಲ..

ಶಿಲ್ಪಿಯ ಕೈಗೆ ಸಿಗಬೇಕಿದ್ದ ಶಿಲೆ.. ಕಟುಕನ ಕೈಗೆ ಸಿಕ್ಕಿತು... ಅವನದನು ಏತಕೆ ಬಳಸುವನು..? ಮಾಂಸ ಕತ್ತರಿಸಲು ಅನುವಾಗಲೆಂದು ಬುಡದಲ್ಲಿಟ್ಟ.. ಅದರ ಮೇಲೆ ಮಾಂಸವನಿಟ್ಟು ಮಚ್ಚಿನಿಂದ ಕೊಚ್ಚತೊಡಗಿದ.. ಏಟು ಬಿದ್ದಿದ್ದು ಶಿಲೆಯಾಗಬೇಕಿದ್ದ ಕಲ್ಲಿಗೆ ಹೆಚ್ಚು.. 

ನೋವನುಂಡರೂ ಬದುಕಲೇ ಬೇಕು.. ಪಾಪಿಯಾದರೂ ಪ್ರೀತಿಸಲೇಬೇಕು.. ಇದು ಅವಳಿಗೊಲಿದ ದೈವತ್ವ..! ಆದರೆ ಪಾಪಿಗೆ ತಿಳಿಯಲಿಲ್ಲ ಅವಳ ಅಂತರಾತ್ಮದ ಪ್ರೀತಿಯ ಮಹತ್ವ.. 

ಆದರೂ ಮರುಭೂಮಿಯಲ್ಲಿ ಜಲಪಾತ ಹುಡುಕುವ ತವಕ ಅವಳದು.. ಆದರೂ ಆ ಮರುಭೂಮಿ ಸುಡುವ ಬಿಸಿಲ ಬೇಗೆ ತಾಳಲಾಗದಾಕೆಗೆ.. ಅವನ ವರ್ತನೆಯಲ್ಲಿ ಪ್ರೀತಿ ಇಲ್ಲ.. ಮಾತಿನಲ್ಲಿ ಮೋಹವಿಲ್ಲ.. ಹೀಗಿರುವಾಗ ಹುಟ್ಟುದೇನು ಅವರಿಬ್ಬರ ಮಧ್ಯೆ..? ಪ್ರೀತಿಯಲ್ಲ.. ಭಯ.. 

ಅವನೆಂದರೆ ಆಕೆಗೆ ಭಯ.. ಎಲ್ಲಿ ತನ್ನ ಮೇಲೆ ಅಟ್ಟಹಾಸಗೈಯ್ಯುವನೋ.. ಹಸಿದ ಹೆಬ್ಬುಲಿಯಂತೆ ತನ್ನ ಮೇಲೆರಗಿ, ತನ್ನ ಮೃದು ದೇಹವನ್ನು ಬೇಟೆಯಾಡಿ ಉಂಡುಬಿಡುವನೋ ಎಂಬ ಭೀತಿ.. ತನ್ನನ್ನು ತಾನು ಕಾಪಾಡಿಕೊಳ್ಳಲೇಬೇಕಾದ “ಅಬಲೆ”.. ಮನದೊಳಗೆ ನೂರಾರು ಚಿಂತೆಗಳು.. ಅಷ್ಟಿದ್ದರೂ ಒಂದೇ ಮನೆಯಲ್ಲಿ ವಾಸಿಸುವ ಸೌಹಾರ್ದತೆಯ ಮನೋಭಾವ ಆಕೆಯ ಮನದೊಳಗೆ.. ಅದು ಆಕೆಯ ಮನದ ಇಂಗಿತವೂ ಹೌದು.. ಅನಿವಾರ್ಯತೆಯೂ ಹೌದು..

ಮನೆಯೊಳಗಿನ ಅಮೃತವ ಸವಿಯದೇ, ಬೀದಿಯಲ್ಲಿ ಒದ್ದಾಡಿ.. ಅವರಿವರ ಜೊತೆಗೆ ಗುದ್ದಾಡಿ.. ಅಕ್ಕ ಪಕ್ಕದವರ ಮನೆಯೊಳಗೆ ಕದ್ದು ಮುಚ್ಚಿ ಹೊಕ್ಕು, ತನ್ನ ಹಸಿವನ್ನು ತಣಿಸಿಕೊಳ್ಳುವ ಮನೋಧರ್ಮದವ ಅವನು.. ಉದಯಕಾಲದೊಳೆದ್ದು, ಅಹೋರಾತ್ರಿಯಲಿ ಬಚ್ಚಿಟ್ಟಿದ್ದನ್ನು ಕದ್ದು ಪಾನಮಾಡಿ, ಉದರದೊಳಗಿಳಿಸಿಕೊಂಡು ತನುವನ್ನು ಬೆಚ್ಚಗಾಗಿಸಿಕೊಳ್ಳುವ ಚಟ ಅವನಿಗೆ.. ಮನೆ ಎಂಬ ಸಂಕೋಲೆಯಲ್ಲಿ... ಮನದೊಳಗಿನ ನೋವಿನ ಸಿಂಚನದಲ್ಲಿ ಬದುಕಿನ ಕ್ರೂರತೆಯನ್ನು ಅರಗಿಸಿಕೊಂಡು ಮಂದಹಾಸವನ್ನು ತೋರ್ಪಡಿಸುವಾಕೆ ಅವಳು.. ಅವಳು ಮಾತ್ರ..

ಸಣ್ಣ ಪುಟ್ಟ ಕೀಟಲೆಗಳು ಅವರಿಬ್ಬರ ನಡುವಿನ ಪ್ರೇಮೋನ್ಮಾದತೆಗೆ ಸಾಕ್ಷಿ.. ಹೊಡೆದರೂ... ಬಡಿದರೂ.. ಬಿಡದ ಬಂಧನವದು.. ಹಿರಿಯರು ಮಾಡಿದ ಆ ಮದುವೆಯಲ್ಲಿ ಹಿರಿಯರ ಆಶೀರ್ವಾದ ಮಾತ್ರ ಇರಲಿಲ್ಲ.. ಭಕ್ಷ ಭೋಜನದ ತರಾತುರಿಯಲ್ಲಿ ಆಶೀರ್ವಾದದ ಪದಗಳನ್ನೇ ಮರೆತುಬಿಟ್ಟಿದ್ದರೇನೋ..!

ಅವನೇನೆಂದರೂ ಅದರೊಳಗೆ ಪ್ರೇಮದ ಓಯಾಸಿಸ್ ಅನ್ನು ಹುಡುಕುವ ಹಂಬಲ ಬಿಡಲಿಲ್ಲ.. ಪಾಪಿ ಪತಿಯಲ್ಲೂ ಪ್ರೀತಿ ಹುಡುಕ ಹೊರಟಾಕೆಗೆ  ಪ್ರೀತಿಯ ಗಂಧವೂ ಸೋಕಲಿಲ್ಲ.,. ಪರ ಮನೆಗೆ ಹೋಗಿ, ಪಾನಮತ್ತನಾಗಿ ಬಂದ ಅವನನ್ನು ಬಾಗಿಲ ಬಳಿಯೇ ನಿಂತು ದುರ್ಬಲ ಕಣ್ಣುಗಳಿಂದ ತೀಕ್ಷ್ಣವಾಗಿ ನೋಡಿ, ಪ್ರೀತಿಯಿಂದ ಅವನನ್ನು ಆಹ್ವಾನಿಸುವಳು.. ಆದರೆ ಅವನನ್ನು ಮುಟ್ಟಲೊಲ್ಲಳು.... ಭಯ-ಆತಂಕ ಹತ್ತಿರವಿದ್ದಾಗ ಮಾತ್ರ.. ದೂರವಿದ್ದರೆ ಮತ್ತದೇ ಪ್ರೀತಿಯ ಮತ್ತು.. ಕುಡುಕನಾದರೂ ಆಕೆಗವನೇ ಸ್ವತ್ತು..


ಮಾರ್ಜಾಲ ನಡಿಗೆಯಲ್ಲಿ ಸದ್ದಿಲ್ಲದೇ ಒಳಗೆ ನುಗ್ಗಿದ ಆಗಂತುಕನಿಗೆ.. ಅವಳನ್ನು ಕಂಡೊಡನೆ ಪೌರುಷದ ಮತ್ತೇರಿತ್ತು..  ಅಚ್ಚರಿಯಿರಲಿಲ್ಲ.. ಅದು ಸಹಜ ಕೂಡ.. ಬಯಕೆ ತಣಿಸಿಕೊಳ್ಳುವ ತವಕ ಅವನದು.. ಆಕೆ ಅಷ್ಟೇ ಸಂಭಾವಿತೆ.. ಚತುರೆ.. ಪರರ ಆಕ್ರಮಣದ ಪರಾಕ್ರಮಕ್ಕೆ ಆಹುತಿಯಾಗದಂತೆ ಪಾರಾಗುವ ಚಿನ್ಮಯಿ. ಅವನ ಕಳ್ಳ ಹೆಜ್ಜೆಗಳನ್ನು ಗ್ರಹಿಸುವ ಚಾಣಾಕ್ಷೆ.. ತನ್ನ ಮೇಲಣ ಆಕ್ರಮಣವನ್ನು ಅರಿತು ಪುಷ್ಪಕ ವಿಮಾನದ ವೇಗದಲ್ಲಿ ಚಲಿಸಿ ತನ್ನ ಕೋಣೆ ಸೇರಿದಳಂದು..
ಅವನ ಹಸಿವಿನ ತವಕ ತಣಿಸಲು ಇರುವ ಏಕೈಕ ನೇರ ಮಾರ್ಗ.. ಆಕೆಯನ್ನು ಬೇಟೆಯಾಡುವುದು.. ರಕ್ತದ ಮಡುವಿನಲ್ಲಿ ಕೆಡವಿ, ಮನತುಂಬಿ ದೇಹವನ್ನು ಉಂಡುಬಿಡುವುದು ಮಾತ್ರ ಅವನ ಧ್ಯೇಯ.. ಜೀವನದ ಬಗ್ಗೆಯಾಗಲಿ, ಇನ್ನೊಂದು ಜೀವದ ಬಗ್ಗೆಯಾಗಲಿ ಅವನಿಗೆ ಕನಿಕರವಿಲ್ಲ.. ಧಮನಿ ಧಮನಿಯೊಳಗೆ ಬೆರೆತ ಪ್ರೇಮಕ್ಕೆ ಅರ್ಥವನ್ನೇ ಪರಿಗಣಿಸದ ಕ್ರೂರಿಯಾತ.. ಸಂಸಾರಿಯಾತ.... ಬೆಂದರೂ ಬೇಯದಿದ್ದರು ಹಸಿ ಮಾಂಸವನ್ನೇ ಜಗಿದು ತಿನ್ನಬೇಕೆಂಬ ಹಂಬಲ..
ಅವನ ಪಾಲಿಗೆ ಆಕೆ ಕೇವಲ ತನ್ನ ಹಸಿವು ನೀಗಿಸುವ ಮಾಂಸದ ಮುದ್ದೆ.. 
 
ಮನೆಯೊಂದು.. ಮೂರು ಬಾಗಿಲು.. ಎತ್ತಲಿಂದ ಇಣುಕಿದರೂ ಅವನದೇ ದರ್ಶನ... ಒಂದೆ ಮನೆಯೊಳಗೆ ಗುಪ್ತಗಾಮಿನಿಯಂತೆ ಇರಲು ಹೇಗೆ ಸಾಧ್ಯ..? ದಿನಕಳೆದಂತೆ ಪ್ರೀತಿ ಕಳೆಗುಂದಿದರೂ, ವಿಧಿಯಿಲ್ಲದೇ ಜೊತೆಯಾಗಿ ಬದುಕಬೇಕಾದ ಅನಿರ್ವಾಯತೆ ಆ ಹೆಣ್ಣಲ್ಲಿ.. ಯವ್ವನ ತುಂಬಿದ್ದ ಆ ಕಣ್ಣಲ್ಲಿ.. ಯಾರೊಂದಿಗೂ ಅವಳ ಮನದ ದುಃಖ ಹಂಚಿಕೊಳ್ಳಲಾಗದು.. ಹೀಗಿರುವಾಗ ಮಾಂಸದ ಮುದ್ದೆ ಎಂದು ಪರಿಗಣಿಸುವ ಅವನೊಂದಿಗೆ ಸುಃಖವನ್ನೂ ಹಂಚಿಕೊಳ್ಳಲಾಗದು.. ಅಲ್ಲವೇ..?? 

ತನ್ನ ಹೆಣ್ತನದ ಬಯಕೆಯನ್ನು ಅರಿತು ನಡೆವವನಿಗಾಗಿ ಆಕೆ ಅಂದು ಕಾದುಕುಳಿತಳು.. ಆದರೆ ಬಂದವನು ಮಾತ್ರ ಪಾನಮತ್ತ ಪತಿರಾಯ..! ವಿಧಿ ವಿಪರ್ಯಾಸವೋ ಏನೋ, ಮದುವೆಯ ಮನೆಯಿಂದ ಮಗಳು ಮಾವನ ಮನೆ ಸೇರಿದಳು.. ಕನ್ಯಾದಾನ ಮಾಡಿದ ಅಪ್ಪ ಮಸಣದ ಹಾದಿಯನ್ನು ತುಳಿದಿದ್ದ.. ಅತ್ತ ಅಪ್ಪನೂ ಇಲ್ಲ.. ಹಡೆದ ಅಮ್ಮನಂತೂ ಎದೆ ಹಾಲನ್ನೂ ಕುಡಿಸಲಿಲ್ಲ.. ಎಲ್ಲವೂ ಹಣೆಬರಹದ ಕುರುಹು.. ಆಕೆಯ ಬದುಕೇ ಇತಿಹಾಸಕ್ಕೆ ತಿರುಗಿ ಹೋಗಿತ್ತು..

ಮನೆಯ ಬಾಗಿಲೇ ಆಕೆಗೆ ಲಕ್ಷ್ಮಣ ರೇಖೆ.. ಬಾಗಿಲ ಹೊರಗೆ ಇಣುಕಿ ನೋಡಿದರೂ, ಶಿರಚ್ಛೇದನ ಮಾಡುವ ಅಧಮನವನು.. ಅಂತರಂಗದ ಆಂತರ್ಯವನ್ನು ಬಿಚ್ಚಿಡಲಾಗದೇ ಗರ್ಭದೊಳಗೊಂದಿಷ್ಟು ಪ್ರೀತಿಯನ್ನು ಹೊತ್ತು ನಡೆಯುತಿಹಳು ಕೆಟ್ಟ ಧೈರ್ಯದಲಿ..  ಆದರೆ ಹಸಿದ ನಾಯಿಗೆ ಅನ್ನದ ರುಚಿಯೇನು... ಹೇಸಿಗೆಯ ರುಚಿಯೇನು..? ಎಂಬಂತೆ ಆಕೆಯ ಎದೆಯೊಳಗಿನ ಕಡಲಾಳದ ಪ್ರೀತಿಯನ್ನು ಅವನು ಅರಿಯಲಿಲ್ಲ.. ಕುರುಡನಿಗೆ ಮಾರ್ಗ ಯಾವುದೋ... ಮಸಣ ಯಾವುದೋ..!!  ಹಾಗೆ ಅವಳಿಗೂ... ಮನೆಯಾವುದೋ... ಬಂದೀಖಾನೆ ಯಾವುದೋ..!! ದಿನ ಹುಟ್ಟುವ ಸೂರ್ಯ ಕಿಟಕಿಯಲ್ಲೇ ಹುಟ್ಟಿ ಕಿಟಕಿಯಲ್ಲೇ ಮುಳುಗುವಷ್ಟೇ ಆಕೆಯ ಪ್ರಪಂಚ..

ಪತಿರಾಯನ ಪಾಪಗಳಿಗೆ ಲೆಕ್ಕವಿಲ್ಲ.. ಈಕೆಯ ದುಗುಡಕ್ಕೆ ಪಾರವೇ ಇಲ್ಲ.. ದುಗುಡದೊಳಗೂ ಧರ್ಮವ ತೋರಿದಳಾಕೆ.. ಪ್ರೀತಿಯ ಮಾಮರವ ನೆಟ್ಟು ಅಧಮನಿಂದ ಪನ್ನೀರ ಬಯಸಿದಳು.. ಪಾಪ ಆಕೆಗೇನು ಗೊತ್ತು.. ಅವನ ಆಂತರ್ಯ..? 
ಕೂಡಿಸಿದ ಬಂಧುಗಳ ಮಾತಿಗೆ ಕಟ್ಟು ಬಿದ್ದು, ಎಲ್ಲವನ್ನೂ ಅನುಭವಿಸಲೇಬಾಕಾಗಿರುದು ಆಕೆಗೆ ಅನಿವಾರ್ಯ... ಯಾವ ಸೋಗು ಇಲ್ಲದೇ ಯೋಗಿಯೊಂದಿಗೆ ಕೂಡಬೇಕೆಂದವಳು ಈಗ ಕೇವಲ ಭೋಗಿಯಾಗಿಬಿಟ್ಟಳು.. ಭೋಗದ ವಸ್ತುವಾಗಿಬಿಟ್ಟಳು..

ಆಕೆಯೇ ತುಟಿಯೊಡೆದು ಹೇಳಿಹಳು.. ತನ್ನ ದುಗುಡವನ್ನ.. ಸ್ಥಿತಿಯನ್ನ.. ತನ್ನ ಜೀವನದ ವಿಕೃತಿಯನ್ನ..
“ಓ ಆತ್ಮೀಯರೇ.. ಏನೆಂದು ಹೇಳಲಿ... ನನ್ನ ವೇದನೆ.. ಕಿಂಚಿತ್ತೂ ದಯೆ ತೋರಲಿಲ್ಲ ನನ್ನವನು.. ಮತ್ತು ನನ್ನವರು... ಯಾರೊಂದಿಗೆ ಹೇಳಿಕೊಳ್ಳಲಿ ಈ ನನ್ನ ನಿವೇದನೆ.. 
ಮನೆಯ ಮಾಲೀಕನಿಗೆ ನನ್ನ ಪತಿರಾಯನೆಂದರೆ ಔದಾರ್ಯ.. ನಾನೆಂದರೆ ಸಿಟ್ಟು.. ಕೊಲ್ಲಬೇಕೆಂಬ ಹುಚ್ಚು.. ಮನೆಯ ಮಾಲೀಕನ ಹೆಜ್ಜೆ ಸದ್ದಿಗೆ, ನನ್ನ ಗೆಜ್ಜೆಯ ಸದ್ದು ಕೂಡ ಅಡಗಿ ಹೋಗುತಿತ್ತು.. ಮಾಲೀಕ ಗೃಹದೊಳಗೆ ಪ್ರವೇಶ ಮಾಡುವಷ್ಟರೊಳಗೆ ನನ್ನ ಮತ್ತು ನನ್ನವನ ಪ್ರೇಮ ನಿನಾದ ನಿಲ್ಲಬೇಕಿತ್ತು.. ಗೂಡೊಳಗೆ ಹೊಕ್ಕು ಬಚ್ಚಿಟ್ಟುಕೊಳ್ಳಬೇಕಿತ್ತು..  ಸದ್ದು ಮಾಡಿದರೆ ನಾನೇ ಬಲಿಪಶುವಾಗಿಹೋಗುತ್ತಿದ್ದೆ.. ಅವರು ಕೊಲ್ಲುವುದು ನನ್ನಂಥ ಹೆಣ್ಣನ್ನೇ ಹೊರತು, ಮೀಸೆ ಬಿಟ್ಟು ರಸ್ತೆಯಲ್ಲಿ ತನ್ನ ಗಂಡಸ್ಥನವನ್ನು ಪ್ರದರ್ಶಿಸುವ ಪುರುಷನನ್ನಲ್ಲ.. 

ನನ್ನವನು ಹೇಗೆ ಇದ್ದರೂ ನನಗವನೇ ತೇಜೋವರ್ಧನ..! ಕುಣಿದಾಡುವ ಮನದ ಕಾಮನೆಗಳನ್ನು ನನ್ನ ಪ್ರೇಮ ಕೀಚಕನೊಡನೇ ನಿವೇದನೆಯನ್ನು ಮಾಡಿಕೊಳ್ಳಬೇಕು ಅಲ್ಲವೇ.. ಅದೂ ಅಲ್ಲದೇ, ಅವನ ಹುಚ್ಚು ಆರ್ಭಟದ ಧಾಳಿಯನ್ನು ಎಷ್ಟು ದಿನ ತಪ್ಪಿಸಿಕೊಳ್ಳಬಲ್ಲೇ...? ಅದಕ್ಕೆ ನಾನು ಅವನಲ್ಲೇ ನನ್ನೆದೆಯ ಸ್ವರ್ಗವನು ಹುಡುಕುತ್ತ ಹೋದೆ..

ತಪ್ಪಿಸಿಕೊಂಡಷ್ಟು ಮದವೇರಿ ಬರುತ್ತಿದ್ದ... ಹೊಸ ಹೊಸ ಸಂಚು ಹೂಡಿ ಬಲೆ ಹೆಣೆಯುತ್ತಿದ್ದ.. ಖದೀಮನ ಸಂಚಿಗೆ ನಾನಂದು ಸಿಲುಕಿಕೊಂಡೆ.. ಅದೊಂದು ದಿನ ಸ್ವಚ್ಛಂದವಾಗಿ ಹಾರಾಡಬೇಕೆಂದು ಮನ ಬಯಸಿತು.. ನೋವಿನ ಹೊಡೆತಕ್ಕೆ... ಬಾಡಿದ ಜೀವಕೆ... ಸ್ವತಂತ್ರದ ದಾಹ ಹೆಚ್ಚಾಯಿತು.. ಹೊರಗೆ ಯಾರೂ ಇರಲಿಲ್ಲ... ಕೋಣೆಯ ಬಾಗಿಲನ್ನು ತೆರೆದು ಹೊರ ಬಂದೆ.. ಸ್ವತಂತ್ರ ಅಂದ್ರೆ ಇದೇನಾ..? ಅಬ್ಬಾ..!! ಅದೆಷ್ಟು ವರ್ಷವಾಯಿತು ನಾನಿದನು ಅನುಭವಿಸಿ...? ಆನಂದಿಸಿ..? ತನ್ಮಯಳಾಗಿ ತನುವನ್ನು ತೆರೆದಿಟ್ಟು ನಗತೊಡಗಿದೆ ಆ ಸ್ವತಂತ್ರದ ಮೋಹಕ್ಕೆ... ತಿಳಿಯಲಿಲ್ಲ ಆಘಂತುಕನ ಅಂತರಾತ್ಮ... ಬಾಗಿಲ ಹಿಂದೆ ಅವಿತು ಕುಳಿತಿದ್ದ..

ಅವನೆಲ್ಲೋ ಹೊರ ಹೋಗಿದ್ದನೆಂಬ ಧೈರ್ಯನನ್ನೊಳಿತ್ತು.. ಅಷ್ಟು ದಿನಗಳಿಂದ ಹಸಿದು ಕುಳಿತಿದ್ದ ಅವನು ಧಡಕ್ಕನೇ ಎನ್ನ ಮೇಲೆರಗಿದ.. ತಡೆಯಲಾಗಲಿಲ್ಲ ಆ ನೋವು.. ಸಹಿಸಲಾಗಲಿಲ್ಲ ಅವನ ಅಸಹ್ಯ ವರ್ತನೆ.. ಅರಿತೋ.. ಅರಿಯದೋ.. ನನ್ನ ನಾನೆ ಅವನಿಗೊಪ್ಪಿಸಿಕೊಂಡೆ.. ವಿಕೃತವಾಗಿ....

ಅಚ್ಚ ಹಸುರಿನ ನಡುವೆ ರೆಕ್ಕೆ ಬಿಚ್ಚಿ ಹಾರುತ್ತಿದ್ದ ಗುಬ್ಬಚ್ಚಿಯನ್ನು ಹದ್ದು ಬಂದು ಹಿಡಿದೊಯ್ದಂತೆ... ಕಾಡಿನ ನಡುವಿನ ಹಸಿರೊಳಗೆ ಕೃಷ್ಣ ಮೃಗ ಹುಲ್ಲಿನ ಸಿಹಿಯನ್ನು ಕಣ್ಮುಚ್ಚಿ ಆನಂದಿಸುವಾಗ.. ಹಸಿದ ಹೆಬ್ಬುಲಿ ಅಟ್ಟಹಾಸಗೈಯ್ಯುವಂತೆ... ನನ್ನ ಮೇಲೆ ಎರಗಿದ.. ಮನಸು ಕೂಡ ಮೃದು... ಮೈ ಕೂಡ ಮೆದು... ಬಿಡಿಸಿಕೊಳ್ಳುವ ಸಾಮರ್ಥ್ಯ ಎನಗಿಲ್ಲ... ಆ ದೇವನೂ ಅದನೆನಗೆ ನೀಡಲಿಲ್ಲ.. ನೀಡಿದ್ದು ಒಂದೇ.. ಗಂಡಸರನ್ನು ಕೆರಳಿಸೋ ಈ ಹೆಣ್ತನ.. ಅವನ ಆ ಕ್ರೂರ ಧಾಳಿಗೆ ಕುಸಿದು ನೆಲಕ್ಕಚ್ಚಿದೆ.. ಅವನಿಗೋ ಎನ್ನ ಮಾಂಸದ ದಾಹ.. ನನಗೋ ಜೀವ ಉಳಿಸಿಕೊಳ್ಳುವ ಮೋಹ.. 


ಕೊನೆಗೆ ಗೆದ್ದಿದ್ದು,  ಅವನ ದಾಹ... ಅವನ ಹಸಿವು.. ಅವನ ಕ್ರೂರತೆ... ಅವನ ಆ ಕ್ರೂರ ನಡತೆಗೆ ನೆಲಕ್ಕಚ್ಚಿ ಬಿದ್ದರೂ ಅವನಿಗೆ ಕರುಣೆ ಬಾರಲಿಲ್ಲ.. “ಕುರುಡು ಕಾಂಚಾಣ ಕುಣಿಯುತಲಿತ್ತು.. ಕಾಲಿಗೆ ಬಿದ್ದವರ ತುಳಿಯುತಲಿತ್ತು” ಎಂಬಂತೆ ನನ್ನ ಮೇಲೆರೆಗಿ ತನ್ನ ಕ್ರೌರ್ಯವನ್ನು ಇನ್ನಷ್ಟು ವಿಕೃತಕ್ಕೆ ತಿರುಗಿಸಿದ.. ಅವನ ಕ್ರೂರತೆಗೆ ದೇಹವೇ ನಲುಗಿ ಹೋಗಿತ್ತು.. ಬಿಸಿ ರಕ್ತ ಛಲ್ಲನೇ ಹೊರ ಚಿಮ್ಮಿತ್ತು.. ಆದರೆ ಅದ್ಯಾವುದು ಅವನಿಗೆ ಬೇಕಿರಲಿಲ್ಲ... ದೇಹ ಬಗೆದು ಹೊರ ಚಿಮ್ಮುತ್ತಿದ್ದ ರಕ್ತವನ್ನು ಪರಿಗಣಿಸದೇ... ನನ್ನ ರೋದನಕ್ಕೂ ಕಿವಿಗೊಡದೇ.. ಇಂಚಿಂಚು ನನ್ನನ್ನು ಸಾವಿನ ಮನೆಯೊಳಗೆ ಕೊಂಡೊಯ್ದ.. ಕಣ್ಣು ಮಂಜಾಯ್ತು.. ನೋವು ಹೆಚ್ಚಾಯ್ತು.. ರಕ್ತ ಪೂರ್ತಿ ಭೂದೇವಿಯ ಮಡಿಲ ಸೇರಿ ಆಕೆಯ ದಾಹವನ್ನೂ ತೀರಿಸಿತ್ತು.. ಆ ಬೇಟೆಗಾರನ ಸಂಚಿಗೆ ನಾನು ಬಲಿಯಾಗಿ ಹೋಗಿದ್ದೆ.. 

ಒಂದೇ ಮನೆಯಲ್ಲಿದ್ದರೂ... ಪ್ರೀತಿಯಿಂದ ಅವನನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ.. ಅವನ ಚಟಗಳು.. ನನ್ನನ್ನು ಚಟ್ಟದ ಮೇಲೆ ಮಲಗಿಸಿತು.. ಅವನನ್ನು ಬದಲಾಯಿಸಲು ನಾನು ಪಟ್ಟ ಅನವರತ ಶ್ರಮ... ಕೊನೆಯವರೆಗೂ ಸಾರ್ಥಕತೆ ಪಡೆಯಲಿಲ್ಲ.. ಬದಲಾವಣೆ ಕಾಣಲೇ ಇಲ್ಲ.. ಆದರೆ ಒಂದು ವಿಧದಲ್ಲಿ ಕೊನೆಗೂ ಬದಲಾವಣೆಯನ್ನು ನಾ ಕಂಡೆ.. ಅವನಲ್ಲಲ್ಲ.. ನನ್ನಲ್ಲಿ.. ಕ್ರೂರಿಯನ್ನು ಬದಲಾಯಿಸಲು ಹೋಗಿ ನಾನೇ ಕ್ರೂರವಾಗಿ ಅಂತ್ಯಗೊಂಡೆ...!!

ಅರೆ ಬರೆ ಮೈಯ್ಯುಂಡ ನನ್ನ ರಾಜ.. ನನ್ನನ್ನು ಹಾಗೆ ರಕ್ತದ ಮಡುವಿನಲ್ಲಿ ಬಿಟ್ಟು ಹೋದ.. ದೇಹ ಕೊಳೆಯಲಾರಂಭಿಸಿತು.. ಮನೆಯೊಡೆಯ ಸಿಕ್ಕ ಸಿಕ್ಕ ಜಾಗದಲ್ಲಿ ಏನು ವಾಸನೆ ಎಂದು ಹುಡುಕತೊಡಗಿದ.. ಅದೊಂದು ಬಿಲದೊಳಗಿಂದ ವಾಸನೆ ಘಪ್ಪನೆ ಮೂಗಿಗೊಡೆಯಿತು.. ಇಣುಕಿ ನೋಡಿದ.. ನಾನು ಸತ್ತು ಬಿದ್ದಿದ್ದೆ.. ಕಟ್ಟಿಗೆಯಿಂದ ನನ್ನನ್ನು ಹೊರಗೆಳೆದ.. ನನ್ನ ಬಾಲವನ್ನು ಹಿಡಿದು ಮೇಲೆತ್ತಿ ಕಸದ ಬುಟ್ಟಿಗೆ ಹಾಕಿದ... ಆದರೆ ನನ್ನನ್ನು ವಿಕೃತವಾಗಿ... ನಿರಂಕುಶವಾಗಿ ಕೊಂದ ಆ ಪಾಪಿ ಪತಿರಾಯನಿಗೆ ಹಾಲನ್ನು ಕೊಟ್ಟ ಮನೆ ಮಾಲೀಕ... ಅದು ನನ್ನನ್ನು ಕೊಂದಿದ್ದಕ್ಕೆ ಮಾಲೀಕ ನೀಡಿದ ಬಹುಮಾನ... 
ಹಾಲು ಕುಡಿದು ಅಲ್ಲೇ ನಿಧಾನಕ್ಕೆ ನಿದ್ದೆಗೆ ಜಾರಿದ ಹಂತಕ... ಮಾರನೆಯ ದಿನ ಕಾರ್ಪೋರೇಷನ್ ಗಾಡಿಯೊಳಗೆ ಬಿದ್ದ ನನ್ನ ದೇಹ.. ಮಂಡೂರಿನ ಕಸದೊಳಗೆ ಸೇರಿತು.. ಅಗ್ನಿ ದೇವನ ಸ್ಪರ್ಶದ ಪರಿಣಾಮ ಸುಟ್ಟು ಬೂದಿಯಾದೆ... ನನ್ನ ಹೆಸರೂ ಇಲ್ಲ... ನನ್ನ ಪ್ರೀತಿಯೂ ಉಳಿಯಲಿಲ್ಲ.. ಅರಿಯದ ಜನರ ಮಧ್ಯೆ.. ನನ್ನ ಪರಿಶುದ್ಧವಾದ ಪ್ರೀತಿ ಅಳಿದು ಹೋಯ್ತು... 

ಜೊತೆಗಿದ್ದ ಮಾತ್ರಕ್ಕೆ ಪ್ರೀತಿ ಇರುತ್ತೆ ಅಂತ ಹೇಳೋಕೆ ಆಗಲ್ಲ... ನಾವಿಬ್ಬರೂ ಇಬ್ಬರೂ ಒಂದೇ ಮನೆಯಲ್ಲಿದ್ದೆವು... ಅಲ್ಪ ಸ್ವಲ್ಪ ಕೀಟಲೆ.. ಮೌನ ರಾಗದ ಸುತ್ತೋಲೆ... ನಮ್ಮನ್ನು ಪ್ರೇಮದಿಂದ ಬಂದಿಸಿತ್ತು.. ಒಪ್ಪುವೆ ನಾ.. ಕ್ರೂರಿ ಮಾರ್ಜಾಲ ರಾಜನಿಗೂ... ಹೆದರಿ ಓಡುವ ನನ್ನಂಥ ಮೂಷಿಕ ರಾಣಿಗೂ ಪ್ರೇಮಾಂಕುರ ಸಲ್ಲದೆಂದು.. ಏನು ಮಾಡಲಿ... ಪ್ರೀತಿ ಕುರುಡು... ಎಲ್ಲಿ ಹುಟ್ಟುವುದೋ... ಹೇಗೆ ಹುಟ್ಟುವುದೋ.. ಯಾಕೆ ಹುಟ್ಟುವುದೋ.. ಸ್ವತಃ ಪ್ರೀತಿಗೂ ಗೊತ್ತಿಲ್ಲ.. ಇನ್ನು ಪ್ರೀತಿ ಮಾಡಿದವರಿಗೆ ಹೇಗೆ ಅರ್ಥವಾದೀತು.. ಅವ ನನ್ನನ್ನು ಬಗೆದು ತಿನ್ನುವ ಭಕ್ಷಕನೆಂದು ಕಂಡರೂ ನನ್ನಲ್ಲಿ ಪ್ರೇಮಾಂಕುರವಾದದ್ದು ನನ್ನ ತಪ್ಪೇ..?? ಇದಕ್ಕೆ ಉತ್ತರವಿಲ್ಲ.. ಕೇವಲ ಪ್ರೆಶ್ನೆ ಮಾತ್ರ.. 

ಆದರೆ ಒಂದಂತೂ ಸತ್ಯ.. ಪ್ರೀತಿ ಪ್ರೇಮದ ಗಂಧವೇ ತಿಳಿಯದ ನನ್ನವನು ನನ್ನನ್ನೇ ಬಗೆದು ತಿಂದು ತನ್ನ ಹಸಿವು ನೀಗಿಸಿಕೊಂಡ.. ಕೊಂದಿದ್ದು ನನ್ನವನಲ್ಲ.. ಮಾರ್ಜಾಲ ರಾಜನೂ ಅಲ್ಲ.. ನನ್ನ ಪ್ರೀತಿ.. ನನ್ನ ಪ್ರೇಮ.. ನನ್ನ ಮನದಿಂಗಿತ.. ನನ್ನ ಪ್ರೇಮದಾಹ..






ವಯಸ್ಸಿನ ದಾಹ ಎಲ್ಲರನ್ನೂ ಪ್ರೇಮದ ಮೋಹಕ್ಕೆ ದೂಡುವುದು ಸಹಜ.. ನಿಮ್ಮ ಪ್ರೇಮ ನಿವೇದನೆಗೆ ಮೊದಲು ಒಮ್ಮೆ ಯೋಚಿಸಿ... ಅವನು ಅಥವ ಅವಳು ನಿಜವಾಗಿಯೂ ನಿಮ್ಮವಳೆ.. ಅಥವ ನಿಮ್ಮವನೇ ಎಂದು..... ಭಾವನೆಗಳಿಗೆ ಬೆಲೆ ಕೊಡದ.. ಪ್ರೇಮಕ್ಕೆ  ಸ್ಪಂದಿಸದ ಸಂಗಾತಿಯೊಂದಿಗಿನ ಬದುಕು ನನ್ನ(ಇಲಿ) ಮತ್ತು ಮಾರ್ಜಾಲದೊಂದಿಗಿನ ಪ್ರೇಮದಂತಾಗುವುದು.. ಮರ್ಜಾಲ ಪ್ರೇಮಕ್ಕೆ ಬಲಿಯಾದ ಪ್ರೇಯಸಿ ಮೂಷಿಕರಾಣಿಯ ಮನದಾಳದ ಮಾತಿದು.. ನನ್ನಲ್ಲಿ ನಿಜ ಪ್ರೀತಿ ಇರಬಹುದು.. ಆದರೆ ಅದನವನು ಎಂದಿಗೂ ಅರಿಯಲಿಲ್ಲ.. ಅವನಿಗೆ ಆ ಪರಿಶುದ್ಧ ಪ್ರೀತಿ ಅರ್ಥವಾಗಲೂ ಇಲ್ಲ.. ಬದುಕಿನ ಕೊನೆಯವರೆಗೂ...


ಇಂತಿ ನಿಮ್ಮ
ಮೂಷಿಕ ರಾಣಿ..



ಚಾಂದಿನಿಯ ದುರಂತ ಪ್ರೀತಿ


ಚಾಂದಿನಿ ಅನ್ನೋ ಹುಡುಗಿ, ತಮಿಳು ನಾಡಿನ ಹಳ್ಳಿಯೊಂದರಿಂದ ಓಡಿ ಬಂದು ಬೆಂಗಳೂರಿನ ಕಾಲೇಜಿನಲ್ಲಿ ಓದು ಶುರು ಮಾಡಿದಳು. ಅಪ್ಪ ಅಮ್ಮನನ್ನು ಬಿಟ್ಟು ಓಡಿ ಬಂದಿದ್ದು ಯಾಕೆ ಅನ್ನೋ ವಿಷ್ಯ ಅವಳು ಯಾರಿಗೂ ಹೇಳ್ತಾ ಇರಲಿಲ್ಲ. ಅಷ್ಟೇ ಅಲ್ಲ, ಯಾವ ಹುಡುಗ, ಹುಡುಗಿಯರೊಂದಿಗೂ ಬೆರೆಯದ ಗೊಂದಲಮಯ ಹುಡುಗಿ ಅವಳು. ಒಂಟಿತನವೇ ಜೀವನಕ್ಕೆ ಆಧಾರ ಎಂದು ಬದುಕುತಿದ್ಳು

ಇವಳು ಸದಾ ಒಂಟಿಯಾಗಿರೋದನ್ನು ನೋಡ್ತಾ ಇದ್ದ ಜೋಸೆಫ್ ಎಂಬ ಹುಡುಗ ಅವಳನ್ನು ಮಾತಾಡಿಸೋಕೆ ಪ್ರಯತ್ನ ಪಟ್ಟ.. ಆರಂಭದಲ್ಲಿ ಅವನೊಂದಿಗೂ ಮಾತನಾಡದ ಆಕೆ ದಿನ ಕಳೆದಂತೆ ತನ್ನ ನೋವನ್ನು ಮರೆಯೋದಕ್ಕೆ ಅವನೊಂದಿಗೆ ಮಾತನಾಡ್ತಾ ಇದ್ಳು. ಆದ್ರೆ ತನ್ನ ಮನದ ದುಃಖವನ್ನು ಯಾವತ್ತೂ ಹೇಳಿಕೊಂಡಿರಲಿಲ್ಲ. ಅದು ಅವಳಿಗೆ ಇಷ್ಟವೂ ಇರಲಿಲ್ಲ.. ಆದ್ರೆ ಅವಳು ಸದಾ ಒಂದು ಮಾತು ಹೇಳ್ತಾ ಇದ್ಳು.  “ನಿನ್ನಿಂದ ನನ್ನ ದುಃಖ ಮರೆತಿದ್ದೀನಿ.. ಖುಷಿ ಕೊಟ್ಟಿದ್ದೀಯ. ಕೊನೆವರೆಗೂ ನೀನು ಒಳ್ಳೆಯವನಾಗೇ ಇರ್ತೀಯ..??” ಅಂತ ಕೇಳ್ತಾ ಇದ್ಳು..ಅವಳ ಮಾತನ್ನು ಕೇಳಿ ನಿನ್ನ ದುಃಖಕ್ಕೆ ನಾನು ಇರ್ತೀನಿ ಅಂತ ಸಮಾಧಾನ ಮಾಡ್ತಿದ್ದ..  ಅವಳ ಮುಖದಲ್ಲಿ ನಗು ಮೂಡಿಸಿ ಮನಸಿನ ಭಾರ ಕಡಿಮೆ ಮಾಡ್ತಿದ್ದ. ಆದ್ರೆ ಅವಳ ತಂದೆ ತಾಯಿಗಳ ವಿಷಯವಾಗಲೀ ಅಥವ ಅವಳು ಬೆಂಗಳೂರಿಗೆ ಬಂದ ಉದ್ದೇಶವಾಗಲೀ ಯಾವುದನ್ನೂ ಹೇಳಿರಲಿಲ್ಲ. ಪರಸ್ಪರ ಸ್ನೇಹ-ಸಲಿಗೆ  ಜೋಸೆಫ್ ಮನದಲ್ಲಿ ಪ್ರೀತಿಯ ಭಾವನೆಯನ್ನು ಮೂಡಿಸಿತ್ತು. ಅದೊಂದು ದಿನ ಅವನು ತನ್ನ ಪ್ರೀತಿಯ ವಿಷಯವನ್ನು ಅವಳಿಗೆ ಹೇಳಿಬಿಟ್ಟ.

ಚಾಂದಿನಿ ಕಕ್ಕಾಬಿಕ್ಕಿಯಾಗಿ ಹೋದಳು. ಏನು ಹೇಳಬೇಕು, ಏನು ಹೇಳಬಾರದು ಎಂದು ತಿಳಿಯದೇ ಕಣ್ಣೀರು ಹಾಕಿದಳು. “ನನಗೆ ಆ ಅರ್ಹತೆ ಇಲ್ಲ.. ನನ್ನಿಂದ ನೀನು ಏನೂ ನಿರೀಕ್ಷೆ ಮಾಡಬೇಡ” ಎಂದು ಹೇಳಿ ಓಡಿ ಹೋದಳು. ಅವನು ಅವಳನ್ನು ಸಮಾಧಾನ ಮಾಡಿದ.. “ ಚಾಂದಿನಿ, ನಾನು ನಿನ್ನ ರೂಪಕ್ಕೆ ಮಾರು ಹೋದವನಲ್ಲ. ನಿನ್ನ ಮನಸು, ಮುಗ್ಧತೆಗೆ ಮಾರು ಹೋದವನು, ಕೊನೆವರೆಗೂ ನಿನ್ನ ಖುಷಿಯಾಗಿ ನೋಡ್ಕೋತೀನಿ” ಅಂತ ಹೇಳಿದ. ಆದರೆ ಚಾಂದಿನಿಯ ಮನಸಿನ ನೋವು ಇನ್ನಷ್ಟು ಹೆಚ್ಚಾಗಿತ್ತು. “ಅಯ್ಯೋ ಜೋಸೆಫ್.. ನನ್ನ ಜೀವನದ ಕೆಲವು ಸತ್ಯಾಂಶಗಳನ್ನು ಹೇಳಿಕೊಳ್ಳೋ ಪರಿಸ್ಥಿತಿಯಲ್ಲಿ ಇಲ್ಲ.. ದಯವಿಟ್ಟು ಕೆದಕಬೇಡ.. ನನ್ನ ಪಾಡಿಗೆ ನನ್ನ ಬಿಟ್ಟುಬಿಡು. ನಾವಿಬ್ರೂ ಒಂದಾಗೋಕೆ ಅಗೋದಿಲ್ಲ ಅಂತ ಗೋಗರೀತಾಳೆ.. ಆದ್ರೆ ಅಪಾರವಾಗಿ ಪ್ರೀತಿಸ್ತಾ ಇದ್ದ ಜೋಸೆಫ್ ಕಾರಣವಿಲ್ಲದೇ ಹೇಗೆ ನನ್ನನ್ನು ರಿಜೆಕ್ಟ್ ಮಾಡ್ತೀಯ..?? ಕಾರಣ ಹೇಳು.. ನಾನು ನನ್ನ ಪ್ರೀತೀನ ಬಿಡ್ತೀನಿ.. ನಾನು ಚೆನ್ನಾಗಿಲ್ವಾ.,.?? ಒಳ್ಳೆಯವನಲ್ವಾ..?? ಹೇಳು ಚಾಂದಿನಿ ಹೇಳು” ಅಂತ ಕೇಳ್ತಾನೆ..

“ಯಾವ ವಿಷಯಗಳು ಕೆದಕಬಾರದು ಅಂತ ನಾನು ಬೆಂಗಳೂರಿಗೆ ಬಂದೆನೋ ಅದೇ ವಿಷಯಗಳು ನನ್ನನ್ನು ಕುಕ್ಕಿ ತಿನ್ನುತ್ತಿವೆ ಎಂದು ಕುಸಿದು ಬೀಳ್ತಾಳೆ.. ಆಗ ಜೋಸೆಫ್ ಅವಳ ಕಣ್ಣೀರನ್ನು ಒರೆಸಿ ಕೇಳಿದ “ಏನಾಗಿದೆ ನಿನಗೆ..?? ನೀನು ಹಿಂದೆ ಹೇಗಿದ್ದೆ ಎಂಬುದು ನನಗೆ ಬೇಡ.. ನಿನ್ನ ಆಸ್ತಿ, ಅಂತಸ್ತು, ತಂದೆ ತಾಯಿಗಳ ವಿಚರ ಬೇಡ.. ಆದ್ರೆ ಮುಂದಿನ ಜೀವನದಲ್ಲಿ ಹಿಂದಿನ ಜೀವನದ ನೋವು ಬಾರದಂತೆ ನಿನ್ನ ನೋಡಿಕೊಳ್ತೀನಿ ಅಂತ ಪ್ರೀತಿಯಿಂದ ಹೇಳಿದ..
ನಿನ್ನ ಪ್ರೀತಿಯಲ್ಲಿ ಮೋಸವಿಲ್ಲ.. ನಿನ್ನಂತ ಹುಡುಗ ಎಷ್ಟು ಹುಡುಕಿದ್ರೂ ಸಿಗೋದಿಲ್ಲ ಜೋಸೆಫ್.. ಆದ್ರೆ ನನ್ನಂಥ ಪಾಪಿಷ್ಟರಿಗೆ ಒಳ್ಳೆಯ ಸ್ನೇಹಿತನಾಗಿದ್ದೀಯ.. ಅದೇ ನನ್ನ ಪುಣ್ಯ. ಆದ್ರೆ ಬೇರೆ ಯಾವ ನಿರೀಕ್ಷೆಯೂ ನನ್ನಿಂದ ಮಾಡ್ಬೇಡ ಅಂತ ಹೇಳಿ ಅಲ್ಲಿಂದ ಹೋಗ್ತಾಳೆ.. ಆದ್ರೆ ಜೋಸೆಫ್ “ನಿನ್ನ ಪ್ರೀತಿ ಇಲ್ಲದೇ ನಾನು ಬದುಕಿರೋದಿಲ್ಲ.. ಬದುಕಿದ್ರೆ ನಿನ್ನ ಜೊತೆನೇ ನೆನಪಿರಲಿ ಚಾಂದಿನಿ” ಅಂತ ಕೂಗಿ ಹೇಳ್ತಾನೆ.
                     ಆದ್ರೆ ಮರುದಿನ ಬೆಳಗಾಗುವಷ್ಟರಲ್ಲಿ ಚಾಂದಿನಿ ಸಾವಿಗೆ ಶರಣಾಗಿರ್ತಾಳೆ. ಚಾಂದಿನಿಯ ನಿಗೂಢ ಸಾವಿಗೆ ಜೋಸೆಫ್ ದಂಗಾಗಿ ಹೋಗ್ತಾನೆ. ಅದ್ರೆ ಆ ಹೆಣಕ್ಕೆ ವಾರಸುದಾರರು ಯಾರೂ ಇರೋದಿಲ್ಲ. ಜೊಸೇಫ್ ತಾನೇ ಎದುರು ನಿಂತು ಶವ ಸಂಸ್ಕಾರ ಮಾಡ್ತಾನೆ. ಆದ್ರೆ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಬಲವಂತ ಮಾಡಿದ್ದಕ್ಕೆ ಅವಳು ಸತ್ತಳು ಅಂತ ಜೋಸೆಫ್ ತುಂಬಾನೇ ಕೊರಗ್ತಾ ಇರ್ತಾನೆ.

ಅದೊಂದು ದಿನ ಜೋಸೆಫ್ ಮನೆಗೆ ಒಂದು ಪತ್ರ ಬರುತ್ತೆ. ವಿಚಿತ್ರ ಅಂದ್ರೆ ಅದು ಚಾಂದಿನಿ ಬರೆದ ಪತ್ರ..!!
ಸತ್ತ ಚಾಂದಿನಿ ಪತ್ರ ಬರೀತಾಳಾ ಅಂತ ಜೋಸೆಫ್ ಗೆ ಅಚ್ಚರಿಯಾಗುತ್ತೆ.  ಅದನ್ನು ತೆಗೆದು ನೋಡಿದಾಗ ಅವನಿಗೊಂದು ಅಚ್ಚರಿಯ ವಿಷಯ ಕಾದಿರುತ್ತೆ. ಅದನ್ನು ಓದಿ ಜೋಸೆಫ್ ದಿಗ್ಭ್ರಾಂತನಾಗುತ್ತಾನೆ.. ಅದು ಚಾಂದಿನಿ ಸಾಯೋಕೆ ಮೊದಲೇ ಬರೆದ ಪತ್ರ. ಆ ಪತ್ರದಲ್ಲಿ ಏನಿತ್ತು ಗೊತ್ತಾ..??


ಗೆ,
ಜೋಸೆಫ್.
ಪದ್ಭನಾಭ ನಗರ, ಬೆಂಗಳೂರು

ಇಂದ
ಚಾಂದಿನಿ, ಮಲ್ಲೇಶ್ವರಂ, ಬೆಂಗಳೂರು

“ಆತ್ಮೀಯ ಗೆಳೆಯ....
          ದಯವಿಟ್ಟ ಕ್ಷಮಿಸು.. ನಿನ್ನ ಸ್ನೇಹವನ್ನು ನಾನು ಬಿಟ್ಟು ಹೋಗ್ತಾ ಇದ್ದೀನಿ.. ನೀನು ನನ್ನ ಜೊತೆಗೆ ಪ್ರೀತಿಯ ಬಂಧನದಲ್ಲಿ ಬೀಳ್ತೀಯ ಅಂತ ನನಗೆ ಗೊತ್ತಿರಲಿಲ್ಲ.. ನಾನು ತಪ್ಪು ಮಾಡಿಬಿಟ್ಟೆ. ಒಳ್ಳೆಯ ಹುಡುಗನ ಮನಸ್ಸಿನಲ್ಲಿ ಇಲ್ಲಸಲ್ಲದ ಆಸೆಗಳನ್ನು ಹುಟ್ಟಿಸಿ ನಿನ್ನ ಬದುಕಿಗೆ ಮುಳ್ಳಾದೆ.  ಪ್ರೀತಿ ಮಾಡಿದ್ದು ತಪ್ಪು ಅಂತ ಹೇಳ್ತಿಲ್ಲ. ಆದ್ರೆ ನನ್ನನ್ನು ಪ್ರೀತಿ ಮಾಡಿದ್ದು ತಪ್ಪು.. ಈ ನಿನ್ನ ತಪ್ಪಿಗೆ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ನಾನೇ ಕಾರಣ ಆಗ್ಬಿಟ್ಟೆ. ಅದಿಕ್ಕೆ ನಾನು ಮಾಡಿದ ತಪ್ಪಿಗೆ ಆತ್ಮಹತ್ಯೆಯೇ ಶಿಕ್ಷೆ ಎಂದು ಆತ್ಮ ಹತ್ಯೆ ಮಾಡಿಕೊಳ್ತಾ ಇದ್ದೀನಿ.
          ನನ್ನ ಮನದ ನೋವು, ನಾನು ತಮಿಳುನಾಡು ಬಿಟ್ಟು ಬೆಂಗಳೂರಿಗೆ ಯಾಕೆ ಬಂದೆ ಅನ್ನೋದನ್ನು ಯಾರಿಗೂ ಹೇಳಿರಲಿಲ್ಲ.. ಆದ್ರೆ ಈಗ ಹೇಳ್ತೀನಿ ಕೇಳು.. ನನ್ನನ್ನು ಹೆತ್ತ ತಂದೆ ತಾಯಿಗಳೇ ಕರುಣೆ ಇಲ್ಲದೇ ನನ್ನನ್ನು ಹೊರಗೆ ಹಾಕಿದ್ರು. ಕಾರಣ ಏನು ಅಂತ ಗೊತ್ತಾ..?? ನನ್ನ ದೇಹದಲ್ಲಿನ ಹಾರ್ಮೋನುಗಳು.. ಹೌದು.. ನಾನು ಹುಟ್ಟಿದಾಗ ನನಗೆ ಇಟ್ಟ ಹೆಸರು ಚಂದನ್.. ಹುಟ್ಟುವಾಗ ಹುಡುಗನಾಗಿ ಹುಟ್ಟಿದೆ.. ಆದ್ರೆ ಬೆಳೆಯುತ್ತ ಬೆಳೆಯುತ್ತ ನನ್ನ ದೇಹದಲ್ಲಿ ಬದಲಾವಣೆಗಳು ಆಗೋಕೆ ಶುರುವಾದವು. ಹುಡುಗಿಯ ದೇಹದಂತೆ ನನ್ನ ದೇಹವೂ ಮಾರ್ಪಾಡಾಯ್ತು. ನಾನೇನು ಮಾಡ್ಲಿ..?? ಇದು ನನ್ನ ತಪ್ಪಾ..?? ಬೆಂಗಳೂರಿಗೆ ಬಂದು ಹುಡುಗಿಯಾಗಿಯೇ ಬದುಕೋಕೆ ಶುರು ಮಾಡಿದೆ. ಆದ್ರೆ ನಿನ್ನ ಜೀವನಕ್ಕೆ ನಾನೇ ಶತೃ ಆಗ್ತೀನಿ ಅಂತ ನಾನು ಅಂದುಕೊಂಡಿರಲಿಲ್ಲ. ನಿನ್ನ ಪ್ರೀತಿ ನನ್ನ ಕಡೆ ತಿರುಗಿತು.. ನಾನೆನು ಮಾಡ್ಲಿ..?? ನಾನು ಸತ್ತರೆ ಯಾರಿಗೂ ಏನೂ ನಷ್ಟವಿಲ್ಲ. ಆದ್ರೆ ನೀನು ಬದುಕಿ ಬಾಳಬೇಕಾದವ. ಅದಿಕ್ಕೆ, ನಿನ್ನ ಜೀವನಕ್ಕೆ ನಾನು ಅಡ್ಡಿಯಾಗಬಾರದು ಅಂತ ಆತ್ಮ ಹತ್ಯೆ ಮಾಡಿಕೊಳ್ತಿದ್ದೀನಿ..
ಆದ್ರೆ ಒಂದು ವಿಷಯ ಗೆಳೆಯ.. ನಿನ್ನ ಸ್ನೇಹ ನಾನು ಎಂದೂ ಮರೆಯೋದಿಲ್ಲ.. ಕ್ಷಮೆ ಇರಲಿ ಜೋಸೆಫ್
ಇಂತಿ ದುರದೃಷ್ಟವಂತೆ
ಚಾಂದಿನಿ

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved